ನಮ್ಮ ಸ್ವ್ಯಾಬ್ ಇತಿಹಾಸ:

"ಸ್ವ್ಯಾಬ್" ಎನ್ನುವ ಕ್ರೀಡಾ ಬರಹಗಾರರ ಸಂಘವು ತನ್ನದೇ ಆದ ವಿಶೇಷತೆ ಹೊಂದಿದೆ. ಈ ಸಂಘವು ದೇಶದಲ್ಲಿಯೇ ಅತ್ಯಂತ ಹಳೆಯದಾದ ಕ್ರೀಡಾ ಪತ್ರಕರ್ತರ ಸಂಘಗಳಲ್ಲಿ ಒಂದೆನಿಸಿದೆ. "ಸ್ವ್ಯಾಬ್" ಕನ್ನಡ ನಾಡಿನ ಕ್ರೀಡಾ ಪತ್ರಿಕೋದ್ಯಮದ ಮಹಾನ್ ಇತಿಹಾಸದ ಭಾಗವಾಗಿ ಬೆಳೆದು ನಿಂತು, ಹೆಮ್ಮೆಯ ಗರಿಯನ್ನು ತನ್ನ ಕಿರೀಟದ ಸಿಂಗಾರವಾಗಿಸಿಕೊಂಡಿದೆ.

ಈ ಸಂಸ್ಥೆ ಸ್ಥಾಪನೆ ಮಾಡಿದ್ದು ಕನ್ನಡ ನಾಡಿನ ಎಲ್ಲಾ ಕ್ರೀಡಾ ಪತ್ರಕರ್ತರು ಒಂದು ವೇದಿಕೆಯಲ್ಲಿ ಸೇರಬೇಕು ಎನ್ನುವ ಉದ್ದೇಶದಿಂದ. ಆಗ ಟೆಲಿವಿಷನ್ ಮಾಧ್ಯಮವು ಅಷ್ಟೊಂದು ದೊಡ್ಡದಾಗಿ ಬೆಳೆದಿರಲಿಲ್ಲ. ಆದ್ದರಿಂದ ಆಗ ಕೇವಲ ಕೆಲವು ದೊಡ್ಡ ಪತ್ರಿಕೆಗಳಲ್ಲಿ ಕೆಲಸ ಮಾಡುವ ಕ್ರೀಡಾ ಉಪ ಸಂಪಾದಕರು, ಸಂಪಾದಕರು ಹಾಗೂ ವರದಿಗಾರರು ಮಾತ್ರ ಇದರ ಅಡಿಯಲ್ಲಿ ಒಂದಾಗಿದ್ದರು. ಆಗ ಬೆಂಗಳೂರಿನಲ್ಲಿ ಕ್ರೀಡಾಕೂಟಗಳನ್ನು ಛಾಯಾಗ್ರಹಣ ಮಾಡಲು ಬರುತ್ತಿದ್ದ ಫೋಟೊಗ್ರಾಫರುಗಳ ಸಂಖ್ಯೆಯೂ ತೀರ ಕಡಿಮೆ ಇತ್ತು. ಆದ್ದರಿಂದ ಅವರಿಗೂ "ಸ್ವ್ಯಾಬ್" ತನ್ನ ಛತ್ರಛಾಯೆಯಲ್ಲಿ ಅವಕಾಶ ಮಾಡಿಕೊಟ್ಟಿತ್ತು ಎನ್ನುವುದನ್ನು ಮರೆಯುವಂತಿಲ್ಲ.

ಆ ಕಾಲದಲ್ಲಿ ಹೆಚ್ಚಾಗಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಮಾತ್ರ ಕ್ರೀಡಾ ವರದಿಗಾರಿಕೆಯು ಒಂದು ಪ್ರತ್ಯೇಕ ವಿಭಾಗವಾಗಿತ್ತು. ಆದರೂ ಕೆಲವು ದೇಶಿ ಭಾಷೆಯ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರು ಇದ್ದರು. ಆದರೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಇದ್ದಂತೆ ಕ್ರೀಡಾ ವಿಭಾಗ ಎನ್ನುವುದು ಪ್ರತ್ಯೇಕವಾಗಿ ಇರಲಿಲ್ಲ. ಆದ್ದರಿಂದ ದೇಶಿ ಭಾಷೆಯ ವರದಿಗಾರರು ಇತರ ವಿಷಯಗಳ ಜೊತೆಗೆ ಕ್ರೀಡಾ ವರದಿಗಾರಿಕೆಯನ್ನು ಮಾಡಿಕೊಂಡು ಬಂದಿದ್ದರು. ಆದರೆ ಆಗಲೂ ಕನ್ನಡ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಉಪ ಸಂಪಾದಕರು ಹಾಗೂ ವರದಿಗಾರರು ಕ್ರೀಡಾ ವರದಿಗಾರಿಗೆಯಲ್ಲಿ ಆಸಕ್ತಿ ಹೊಂದಿದವರು "ಸ್ವ್ಯಾಬ್" ಅಂಗವಾಗಲು ಉತ್ಸಾಹ ತೋರಿದ್ದರು.

ಬಾಷಾವಾರು ಪತ್ರಿಕೆಯಲ್ಲಿ ರಾಷ್ಟ್ರದಲ್ಲಿಯೇ ಮೊದಲ ಬಾರಿಗೆ ಕ್ರೀಡೆಗೆ ಪ್ರತ್ಯೇಕವಾಗಿ ಕ್ರೀಡಾ ಪುಟವನ್ನು ಹೊರತಂದಿದ್ದ "ಪ್ರಜಾವಾಣಿ" ದಿನ ಪತ್ರಿಕೆಯ ಕ್ರೀಡಾ ವರದಿಗಾರರು ಹಾಗೂ ಉಪ ಸಂಪಾದಕರು ಮತ್ತು ಕ್ರೀಡಾ ಸಂಪಾದಕರು "ಸ್ವ್ಯಾಬ್" ಚಟುವಟಿಕೆಯಲ್ಲಿ ವಹಿಸಿದ ಪಾತ್ರ ಹಿರಿದು. ವಿಶೇಷವೆಂದರೆ ಇದೇ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದ್ದ ಕ್ರೀಡಾ ಸಂಪಾದಕರ ಕಲ್ಪನೆಯ ಸಾಕಾರ ರೂಪವೇ "ಸ್ವ್ಯಾಬ್".

ಅಂದು "ಪ್ರಜಾವಾಣಿ"ಯಲ್ಲಿ ಕ್ರೀಡಾ ಸಂಪಾದಕರಾಗಿದ್ದು ಎಚ್.ಎಸ್. ಸೂರ್ಯನಾರಾಯಣ (ಸೂರಿ). ಅವರ ಕನಸಿನ ಫಲವಾಗಿಯೇ ಕರ್ನಾಟಕದಲ್ಲಿ ಉದಯವಾಯಿತು ಕ್ರೀಡಾ ಬರಹಗಾರರ ಸಂಘ. ಇದು ಸ್ಥಾಪನೆಯಾಗಿದ್ದು 1975ರಲ್ಲಿ. ಮೊಟ್ಟ ಮೊದಲ ಸಭೆ ನಡೆದಿದ್ದು ಬೆಂಗಳೂರಿನ "ಏರ್ ಲೈನ್ಸ್ ಹೊಟೇಲ್" ಆವರಣದಲ್ಲಿ. ಅದೊಂದು ಸಹಜ ಚರ್ಚೆಯ ವೇದಿಕೆಯಂತೆ ಆಗ ಕಾಣಿಸಿತ್ತು. ಆದರೆ ಆನಂತರ ಅದಕ್ಕೊಂದು ಸ್ವರೂಪವೂ ದೊರೆತು "ಸ್ವ್ಯಾಬ್" ಎನ್ನುವ ಸತ್ವವುಳ್ಳ ಸಂಘಟನೆಯಾಗಿ ಬೆಳೆದು ನಿಂತಿತು.

ಬೆಂಗಳೂರಿನಲ್ಲಿ ಮೊದಲ ಬಾರಿಗೆ ಅಂದರೆ 1970ರಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಕ್ರಿಕೆಟ್ ಟೆಸ್ಟ್ ನಡೆದಾಗ ಕ್ರೀಡಾ ಬರಹಗಾರರ ಸಂಘ ಸ್ಥಾಪನೆ ಮಾಡುವ ಯೋಚನೆಯು ಮೊಳಕೆಯೊಡಿದಿತ್ತು. "ಸೂರಿ" ಅವರು ಇಂಥದೊಂದು ಸಂಘವನ್ನು ಕಟ್ಟುವ ಪ್ರಸ್ತಾವವನ್ನು ಮುಂದಿಟ್ಟಿದ್ದರು. ಆಗ ಕರ್ನಾಟಕದ ಕ್ರೀಡಾ ವರದಿಗಾರಿಕೆ ಕ್ಷೇತ್ರದಲ್ಲಿ ಇದ್ದದ್ದು ಬೆರಳೆಣಿಕೆಯಷ್ಟು ಪತ್ರಕರ್ತರು. ವಿಶೇಷವೆಂದರೆ ಮೊದಲ ಬಾರಿಗೆ ಕ್ರೀಡಾ ಬರಹಗಾರರ ಸಂಘಟನೆಯನ್ನು ಕಟ್ಟುವ ಯೋಚನೆ ಮಾಡಿದಾಗ ಅಲ್ಲಿ ಚರ್ಚೆಗೆ ಇದ್ದವರು ಕೇವಲ ಆರು ಮಂದಿ ಮಾತ್ರ.

"ಪ್ರಜಾವಾಣಿ"ಯ ಎಚ್.ಎಸ್. ಸೂರ್ಯನಾರಾಯಣ, ಎಸ್. ದೇವನಾಥ್, ದಾಸಪ್ಪ, ಡಿ.ಎಚ್. ಶ್ರೀನಿವಾಸ್, "ಪ್ರಜಾವಾಣಿ" ಕಡೆಗೆ ಬರುವ ಯೋಚನೆ ಮಾಡಿದ್ದ "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, "ಪ್ರಜಾಮತ"ದಲ್ಲಿ ಅಂಕಣಕಾರರಾಗಿದ್ದ ಸಿದ್ದೇಗೌಡ (ಜಾನುಪ್ರಿಯ), "ಸಂಯುಕ್ತ ಕರ್ನಾಟಕ"ದಲ್ಲಿ ಉಪ ಸಂಪಾದಕರಾಗಿದ್ದು ಕ್ರೀಡಾ ವರದಿ ಬರೆಯುವಲ್ಲಿ ಆಸಕ್ತಿ ಹೊಂದಿದ್ದ ಪಿ.ಸಿ.ಅಪ್ಪಾಜಿ ಹಾಗೂ "ಲೋಕವಾಣ" ಯಲ್ಲಿ ಅರೆಕಾಲಿಕ ಕ್ರೀಡಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದ ನಾರಾಯಣಸ್ವಾಮಿ ಅವರು ಕ್ರೀಡಾ ಪತ್ರಕರ್ತರಿಗಾಗಿ ಒಂದು ಸಂಘ ಕಟ್ಟಬೇಕೆನ್ನುವ ಉತ್ಸಾಹ ತೋರಿದ್ದರು.

ಆದರೆ ಅಂದುಕೊಂಡಷ್ಟು ಬೇಗ ಸಂಘವನ್ನು ಕಟ್ಟುವ ಕೆಲಸ ಆಗಲಿಲ್ಲ. ಅದು ಸಾದ್ಯವಾಗಿದ್ದು ಐದು ವರ್ಷಗಳ ನಂತರ ಅಂದರೆ 1975ರಲ್ಲಿ. ಆ ಹೊತ್ತಿಗಾಗಲೇ ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಕ್ರೀಡಾ ಬರಹಗಾರರು ಕಾಣಿಸಿಕೊಂಡಿದ್ದರು. ದೊಡ್ಡ ಮಟ್ಟದಲ್ಲಿ ಬೆಳೆದು ನಿಲ್ಲುವಂಥ ಕ್ರೀಡಾ ವರದಿಗಾರಿಗೆ ತಮ್ಮ ಸಾಮರ್ಥ್ಯವನ್ನೂ ತೋರಿದ್ದರು. 1975ರಿಂದ 80ರ ಅವಧಿಯಲ್ಲಿ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗೆ ಭಾರಿ ಸಂಖ್ಯೆಯಲ್ಲಿ ಯುವ ಕ್ರೀಡಾ ಪತ್ರಕರ್ತರು ಸೇರಿದರು. ಇವರೊಂದಿಗೆ ಹಳಬರು ಸೇರಿಕೊಂಡು 1975ರಲ್ಲಿ ಸಂಘ ರಚನೆ ಮಾಡಲಾಯಿತು.

1975ರಲ್ಲಿ ಸಂಘ ಸ್ಥಾಪನೆ ಆದಾಗ "ಡೆಕ್ಕನ್ ಹೆರಾಲ್ಡ್" ಇಂಗ್ಲಿಷ್ ಪತ್ರಿಕೆಯಲ್ಲಿ ಲೆಸ್ಲಿ ವಿಲ್ಸನ್, ಆರ್. ಅರವಿಂದಮ್, ಜಿ. ಭಗವಾನ್, ಆನಂದ್ ಫಿಲಾರ್, ಎನ್.ಎಸ್. ಕೃಷ್ಣಸ್ವಾಮಿ, ಡೆಡ್ಲಿ ಪೆರಿರಾ, "ಪ್ರಜಾವಾಣಿ" ಕನ್ನಡ ಪತ್ರಿಕೆಯ ಎಚ್.ಎಸ್. ಸೂರ್ಯನಾರಾಯಣ, ಡಿ.ಎಚ್. ಶ್ರೀನಿವಾಸ್ (ಡಚ್ಚ), ಪಿ.ಸಿ. ಅಪ್ಪಾಜಿ, "ಸಂಯುಕ್ತ ಕರ್ನಾಟಕ"ದ ಎಸ್. ದೇವನಾಥ್ (ಆನಂತರ "ಪ್ರಜಾವಾಣಿ" ಸೇರಿದರು), "ಲೋಕವಾಣಿ" ಪತ್ರಿಕೆಯಲ್ಲಿದ್ದ ಎಂ.ಎ. ಪೊನ್ನಪ್ಪ, "ಕನ್ನಡ ಪ್ರಭ"ದ ಸಂಪಿಗೆ ಸುಬ್ಬಣ್ಣ, ಸಿ.ಎಸ್. ಪ್ರಭಾಕರ್, ಎ.ಆರ್. ಆನಂದ್, "ಆಕಾಶವಾಣಿ"ಯಲ್ಲಿ ಕೆಲಸ ಮಾಡುತ್ತಿದ್ದ ಕೆ.ಎಸ್. ಪುರುಷೋತ್ತಮ್, "ಜನವಾಣಿ" ಮತ್ತು "ಪ್ರಜಾಮತ"ದ ಸಿದ್ದೇಗೌಡ (ಜಾನುಪ್ರಿಯ), "ಇಂಡಿಯನ್ ಎಕ್ಸ್ ಪ್ರೆಸ್" ಇಂಗ್ಲಿಷ್ ಪತ್ರಿಕೆಯ ವೇಣಿ ಮಾಧವ್, ಜಿ. ರುದ್ರ, ಶ್ರೀನಿವಾಸ್, ಡೆಂಜಿಲ್, "ಹಿಂದು" ಪತ್ರಿಕೆಯಲ್ಲಿ ಕೆಸಲ ಮಾಡುತ್ತಿದ್ದ ಪಿ.ಆರ್. ವಿಶ್ವನಾಥ್, "ಸಲಾರ್" ಪತ್ರಿಕೆಯ ಅಲಿ ಹಫೀಜ್, ಮುನೀರ್ ಸೇಠ್, "ಪಿ.ಟಿ.ಐ." ವರದಿಗಾರರಾಗಿದ್ದ ಇ. ರಾಘವನ್ ಅವರು "ಸ್ವ್ಯಾಬ್" ಎನ್ನುವ ದೊಡ್ಡ ಸಂಘವನ್ನು ಕಟ್ಟಲು ಅಡಿಗಲ್ಲು ಇಟ್ಟವರು.

1982ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಹಾಗೂ ಹಿರಿಯ ಕ್ರೀಡಾ ಪತ್ರಕರ್ತರು "ಸ್ವ್ಯಾಬ್" ಸಂಘಟನೆಯಲ್ಲಿ ತಮ್ಮ ಹೆಸರು ನೋಂದಾಯಿಸಿದರು. ಆನಂತರ ಅವರಲ್ಲಿ ಕೆಲವರು ಬೇರೆ ಬೇರೆ ಊರುಗಳಿಗೆ ತೆರಳಿದರು. ಆ ಕಾಲದಲ್ಲಿ "ಸ್ವ್ಯಾಬ್" ಪ್ರವಾಹದಲ್ಲಿ ಸೇರಿಕೊಂಡಿದ್ದು ಬಿ.ಆರ್. ಶರಣ್ ಕುಮಾರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ವೇದಂ ಜೈಶಂಕರ್ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ಪ್ರೆಸ್), ರಾಜನ್ ಬಾಲಾ (ಡೆಕ್ಕನ್ ಹೆರಾಲ್ಡ್, ಇಂಡಿಯನ್ ಎಕ್ಸ್ ಪ್ರೆಸ್), ಸತೀಶ್ ಪಾಲ್, ಸುರೇಶ್ ಪಾಲ್, ಡಿ. ರವಿಕುಮಾರ್ (ಡೆಕ್ಕನ್ ಹೆರಾಲ್ಡ್), ರೂಪಾ ರಾವ್ (ಇಂಡಿಯನ್ ಎಕ್ಸ್ಪ್ರೆಸ್), ಕಲ್ಯಾಣ್ ಅಶೋಕ್ (ದಿ ಹಿಂದೂ), ಎಚ್.ಎಸ್. ಮಂಜುನಾಥ್ (ಡೆಕ್ಕನ್ ಹೆರಾಲ್ಡ್), ಸಿ. ಗೋಪಾಲ ಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), ಗೋಪಾಲ ಕೃಷ್ಣ ಹೆಗಡೆ (ಸಂಯುಕ್ತ ಕರ್ನಾಟಕ, ಪ್ರಜಾವಾಣಿ), ಸುರೇಶ್ ಮೆನನ್ (ಡೆಕ್ಕನ್ ಹೆರಾಲ್ಡ್), ಎಸ್.ಎಸ್. ಶ್ರೀಕುಮಾರ್ (ಇಂಡಿಯನ್ ಎಕ್ಸ್ ಪ್ರೆಸ್, ಡೆಕ್ಕನ್ ಹೆರಾಲ್ಡ್), ವಿಲ್ಸನ್ ಜೂನಿಯರ್ (ಡೆಕ್ಕನ್ ಹೆರಾಲ್ಡ್), ಶ್ಯಾಮ್ (ಡೆಕ್ಕನ್ ಹೆರಾಲ್ಡ್), ಪಟ್ನಂ ಅನಂತ ಪದ್ಮನಾಭ (ಪ್ರಜಾವಾಣಿ), ಕಲ್ಯಾಣ್ ಆನಂದ್ (ಡೆಕ್ಕನ್ ಹೆರಾಲ್ಡ್), ವಿಜಯ್ ಮೃತ್ಯುಂಜಯ (ಡೆಕ್ಕನ್ ಹೆರಾಲ್ಡ್), ಇಕ್ರಂ ಖಾನ್, ಚೆರಿಯನ್ ಥಾಮಸ್ (ಟೈಮ್ಸ್ ಆಫ್ ಇಂಡಿಯಾ).

ಆನಂತರದ ವರ್ಷಗಳಲ್ಲಿ ದಿನಪತ್ರಿಕೆಗಳ ನಡುವೆ ಪ್ರಸಾರ ಸಂಖ್ಯೆ ಹೆಚ್ಚಿಸಲು ಪ್ರಬಲ ಪೈಪೋಟಿ ನಡೆಯಿತು. ಇದರ ಪರಿಣಾಮವಾಗಿ ಅನೇಕ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚತೊಡಗಿತು. 1990ರ ಸುಮಾರಿಗೆ ಹೊಸ ತಲೆಮಾರಿನವರು ಭಾರಿ ಸಂಖ್ಯೆಯಲ್ಲಿ ಕ್ರೀಡಾ ಪತ್ರಿಕೋದ್ಯಮಕ್ಕೆ ಸೇರ್ಪಡೆಯಾದರು. ಕೆಲವರು ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಇಲ್ಲಿ ವಿವಿಧ ಪತ್ರಿಕೆಗಳಲ್ಲಿ ಕ್ರೀಡಾ ವರದಿಗಾರರಾಗಿ ಕೆಲಸ ಮಾಡತೊಡಗಿದರು. ರಾಜ್ಯದ ವಿವಿಧ ಭಾಗದಿಂದಲೂ ಕ್ರೀಡಾ ವರಿದಿಗಾರರು ಉದ್ಯಾನನಗರಿಗೆ ಬಂದರು.

ಆ ಒಂದು ದಶಕದಲ್ಲಿ ಕ್ರೀಡಾ ವರದಿಗಾರರು ಬೆಂಗಳೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಹೆಚ್ಚಾದರು. ಅದೊಂದು ಅಚ್ಚರಿಯೂ ಆಗಿತ್ತು. ಕ್ರೀಡಾ ವರದಿಗಾರರ ಸಂಖ್ಯೆ ಹೆಚ್ಚಿದಂತೆ "ಸ್ವ್ಯಾಬ್" ಸದಸ್ಯರ ಸಂಖ್ಯಾ ಬಲವು ಅಧಿಕವಾಯಿತು. ಅದೊಂದು ಪರಿವರ್ತನೆಯ ಕಾಲವೇ ಸರಿ. ಒಂದೆಡೆ ಪತ್ರಿಕೆಗಳ ನಡುವೆ ಸ್ಪರ್ಧೆ ಬಲವಾಗಿ ಕ್ರೀಡಾ ವರದಿಗಾರಿಕೆಗೆ ಒತ್ತು ಸಿಗುತ್ತಿದ್ದಂತೆಯೇ, ಇನ್ನೊಂದೆಡೆ ಕ್ರೀಡಾ ವರದಿಗಾರರ ಸಂಖ್ಯೆಯೂ ಹೆಚ್ಚಿ "ಸ್ವ್ಯಾಬ್" ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಸಾಧ್ಯವಾಯಿತು.

"ಕನ್ನಡ ಪ್ರಭ"ದ ಶ್ರೀಕರ್, "ದಿ ಹಿಂದೂ" ಪತ್ರಿಕೆಯ ಅವಿನಾಶ್ ನಾಯರ್, "ಪ್ರಜಾವಾಣಿ"ಯ ಪಿ.ಜಿ. ಪೂಣಚ್ಚ, ನಾಗೇಶ್ ಶೆಣೈ, ಅಮೃತ್ ಜೋಗಿ, ಶಿವಕುಮಾರ್ ಕಣಸೋಗಿ, ಸತೀಶ್ ಚಪ್ಪರಿಕೆ, ಡಿ.ವಿ. ಗರುಡ, ವಿಶಾಖ ಎನ್., ಸಿ.ಆರ್.ನವೀನ್, ("ಉದಯವಾಣಿ", ಆನಂತರ "ಪ್ರಜಾವಾಣಿ"), "ಪಿ.ಟಿ.ಐ." ವರದಿಗಾರ ಟಿ.ಪಿ. ಕೃಷ್ಣಮೂರ್ತಿ. "ಯು.ಎನ್.ಐ." ವರದಿಗಾರ ವಿಜಯ ಕುಮಾರ್, "ಸಂಯುಕ್ತ ಕರ್ನಾಟಕ"ದ ಎಚ್.ಕೆ. ವಿಶ್ವನಾಥ್, ಶ್ಯಾಮ ಸುಂದರ್, "ಕನ್ನಡ ಪ್ರಭ"ದ ಸಿ.ಆರ್. ಕೃಷ್ಣಮೂರ್ತಿ, ಡಿ.ಎಂ. ಭಟ್, ಸಿ. ಗೋಪಾಲಕೃಷ್ಣ (ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ), "ಡೆಕ್ಕನ್ ಹೆರಾಲ್ಡ್" ಪತ್ರಿಕೆಯ ಜೋಸೆಫ್ ಹೂವರ್ (ಇಂಡಿಯನ್ ಎಕ್ಸ್ ಪ್ರೆಸ್, ಆನಂತರ ಡೆಕ್ಕನ್ ಹೆರಾಲ್ಡ್), ಕೆ. ರಾಜೀವ್, ಗೀತಾ ರಾಮಕೃಷ್ಣ, ಆರ್. ಸತ್ಯ, ಆರ್. ಕೌಶಿಕ್, ವಿಜಯ್ ಮೈಕಲ್ ರಾಜ್, ಜಾನ್ ವರ್ಗಿಸ್, ನಾರಾಯಣ ಸ್ವಾಮಿ,, ಜಿ. ಕೃಷ್ಣನ್, ಪ್ರಜ್ವಲ್ ಹೆಗಡೆ (ಈಗ ಟೈಮ್ಸ್ ಆಫ್ ಇಂಡಿಯ), ಸತೀಶ್ ವಿಶ್ವನಾಥ್, ರವಿ ಚಕ್ರವರ್ತಿ (ಡೆಕ್ಕನ್ ಹೆರಾಲ್ಡ್, ಡಿ.ಎನ್.ಎ.), ರವಿ ಶಂಕರ್ (ದಿ ಹಿಂದೂ), ಮಗೇಶ್ವರನ್, ಡೇವಿಡ್, ಸತ್ಯ (ಇಂಡಿಯನ್ ಎಕ್ಸ್ ಪ್ರೆಸ್), ಕ್ರಿಸ್ಟೋಫರ್ ಹೂವರ್ (ಏಷ್ಯನ್ ಏಜ್), ಈಶ್ವರ್ ರಾವ್ (ದೂರದರ್ಶನ), ಸೂತ್ರಮ್ ಸುರೇಶ್ (ಟೈಮ್ಸ್ ಡೆಕ್ಕನ್, ಟೈಮ್ಸ್ ಆಫ್ ಇಂಡಿಯ), ವಿಜಯ ಕರ್ನಾಟಕದ ಜಗನ್ನಾಥ್, ಆನಂದ್ ಇವರೆಲ್ಲರೂ "ಸ್ವ್ಯಾಬ್" ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ರಾಘವೇಂದ್ರ ಗಣಪತಿ ಅವರೂ ಸ್ವಾಬ್ ಚಟುವಟಿಕೆಯಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು. 2000ದಿಂದ ಸ್ವಾಬ್ ಸದಸ್ಯರಾಗಿರುವ ರಾಘವೇಂದ್ರ ಗಣಪತಿ ಅವರು 1999ರಲ್ಲಿ ಸಂಯುಕ್ತ ಕರ್ನಾಟಕ ಸೇರಿದಾಗಿನಿಂದ ಕ್ರೀಡಾ ವರದಿಗಾರರಾಗಿದ್ದಾರೆ. "ಉದಯವಾಣಿ", "ಉಷಾಕಿರಣ", "ಟೈಮ್ಸ್ ಆಫ್ ಇಂಡಿಯಾ ಕನ್ನಡ" ಮತ್ತೀಗ ಉದಯವಾಣಿಯಲ್ಲಿ ಕ್ರೀಡಾ ಸಂಪಾದಕರಾಗಿ ಪ್ರಭಾವಿಯಾಗಿ ತಮ್ಮ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೀಗೆ ಎಲ್ಲ ನಿಟ್ಟಿನಿಂದ ಹರಿದುಬಂದ ಕ್ರೀಡಾ ವರದಿಗಾರರ ಪ್ರವಾಹವು "ಸ್ವ್ಯಾಬ್" ಎನ್ನುವ ಆಣೆಕಟ್ಟನ್ನು ಭರ್ತಿ ಆಗಿಸಿತು. ಇದರಿಂದಾಗಿ ಚಟುವಟಿಕೆಗಳು ಚುರುಕು ಪಡೆದವು. ಉನ್ನತ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಶಿಷ್ಟವಾದ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಲು ಸಾಧ್ಯವಾಯಿತು. ಆದರೆ ನಡುವೆ ಅನೇಕ ಅಡಚಣೆಗಳೂ ಇದ್ದವು. ಆದ್ದರಿಂದ ಕೆಲವು ಕಾಲ ಇಂಥ ಚಟುವಟಿಕೆಗಳು ನಡೆಯುವುದು ಕಷ್ಟವೂ ಆಯಿತು.

2000ನೇ ವರ್ಷದ ಈಚೆಗೆ ಕ್ರೀಡಾ ಪತ್ರಕರ್ತರ ಸಂಖ್ಯೆಯು ಇನ್ನಷ್ಟು ಜಾಸ್ತಿಯಾಯಿತು. "ಪ್ರಜಾವಾಣಿ"ಯ ಜಿ.ಸುಭಾಷ್ ಚಂದ್ರ, ಮಹಮದ್ ನೂಮಾನ್, ಕೆ. ಓಂಕಾರ ಮೂರ್ತಿ, "ಉದಯವಾಣಿ"ಯ ಪರಮೇಶ್ವರ ಗುಂಡ್ಕಲ್, ಮಲ್ಲಿಕಾಚರಣ್, ಸನತ್, ಪರಶುರಾಮ್, "ಕನ್ನಡ ಪ್ರಭ"ದ ಜಿ.ಎಸ್.ಬಿ.ಅಗ್ನಿಹೋತ್ರಿ (ಕಳೆದ 2 ತಿಂಗಳಿಂದ ಸುವರ್ಣ ನ್ಯೂಸ್), ಸೋಮಶೇಖರ ಪಡುಕೆರೆ, "ಡೆಕ್ಕನ್ ಕ್ರಾನಿಕಲ್"ನ ಮನುಜಾ ವೀರಪ್ಪ, ಸಹನ್ ಬಿದ್ದಪ್ಪ, ಅಭಿಷೇಕ್, "ಡಿ.ಎನ್.ಎ."ನ ನಂದಿನಿ ಕುಮಾರ್, ವಿವೇಕ್ ಫಡ್ನೀಸ್, "ವಿಜಯ ಕರ್ನಾಟಕ"ದ ಎಂ.ಆರ್. ದಿಂಡಿಲಕೊಪ್ಪ, ರಮೇಶ್, ವಿರೂಪಾಕ್ಷ, "ಬೆಂಗಳೂರು ಮಿರರ್" ಪತ್ರಿಕೆಯ ಸುನಿಲ್ ಸುಬ್ಬಯ್ಯ, "ದಿ ಹಿಂದೂ"ನ ಕೆ.ಸಿ. ವಿಜಯಕುಮಾರ್, "ಟೈಮ್ಸ್ ಆಫ್ ಇಂಡಿಯಾ"ದ ಅಭಯ್ ಜೋಸ್, "ಡೆಕ್ಕನ್ ಹೆರಾಲ್ಡ್"ನ ಸಿಡ್ನಿ, ಉನ್ನಿ ಕೃಷ್ಣನ್, ರೋಷನ್, ಮಧು ಜವಳಿ, ಜೋಸಿ ಸ್ಯಾಮ್ಯುಯಲ್, ದೀಪಕ್...ಹೀಗೆ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಸಾಗಿದೆ.

1982ರಿಂದ 2000ದವರೆಗೆ ಕ್ರೀಡಾ ಬರಹಗಾರರ ಸಂಘದ ಚುನಾವಣೆ ಮತ್ತು ಕಾರ್ಯಚಟುವಟಿಕೆ ಬಿರುಸಾಗಿ ಸಾಗತ್ತು. 1990ರಲ್ಲಿ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟ(ಎಸ್.ಜೆ.ಎಫ್.ಐ.)ಕ್ಕೆ ನೋಂದಣಿಯಾದ ಬೆಂಗಳೂರು ಕ್ರೀಡಾ ಬರಹಗಾರರ ಸಂಘ (ಸ್ವ್ಯಾಬ್) ಅನೇಕ ಬಾರಿ ಅಖಿಲ ಭಾರತ ಮಟ್ಟದ ಕ್ರಿಕೆಟ್ ಟೂರ್ನಿಗಳನ್ನೂ ನಡೆಸಿತು. ಅಷ್ಟೇ ಅಲ್ಲ ಎಸ್.ಜೆ.ಎಫ್.ಐ. ವಾರ್ಷಿಕ ಸಭೆಗಳ ಆತಿಥ್ಯವನ್ನೂ ವಹಿಸಿಕೊಂಡಿತ್ತು. ಆನಂತರ ಚಟುವಟಿಕೆ ಸ್ವಲ್ಪ ಕಡಿಮೆ ಆಗಿದ್ದು ಬೇಸರ. ಆದರೂ ಈಗ ಸಾಕಷ್ಟು ಯುವಕರು "ಸ್ವ್ಯಾಬ್"ನಲ್ಲಿ ಇದ್ದಾರೆ. ಅವರೆಲ್ಲ ಈ ಸಂಘಟನೆಗೆ ಹೊಸ ಚೈತನ್ಯವನ್ನು ನೀಡಲು ಸಾಧ್ಯ.

ಟೆಲಿವಿಷನ್ ಅಬ್ಬರ ಇಲ್ಲದ ಕಾಲದಲ್ಲಿ ಆರಂಭವಾಗಿದ್ದ "ಸ್ವ್ಯಾಬ್"ನಲ್ಲಿ ಆಗ ಟೆಲಿವಿಷನ್ ವರದಿಗಾರರಿಗೆ ಹಾಗೂ ಇಂಟರ್ ನೆಟ್ ಕ್ಷೇತ್ರದಲ್ಲಿ ಕೆಲಸ ಮಾಡುವ ಕ್ರೀಡಾ ಪತ್ರಕರ್ತರಿಗೆ ಅವಕಾಶ ನೀಡಬೇಕೆ-ಬೇಡವೇ ಎನ್ನುವ ಸ್ಪಷ್ಟ ಯೋಚನೆ ಮಾಡಿರಲಿಲ್ಲ. 2000ದಿಂದ ಈಚೆಗೆ ಈ ಕುರಿತು ಬಿರುಸಾದ ಚರ್ಚೆ ನಡೆಯುತ್ತ ಬಂದಿದೆ. ಅನೇಕ ಬಾರಿ ಈ ವಿಷಯವು "ಸ್ವ್ಯಾಬ್" ಸರ್ವ ಸದಸ್ಯರ ಸಭೆಯಲ್ಲಿ ಚರ್ಚೆಯೂ ಆಗಿದೆ. ಆದರೆ ಸ್ಪಷ್ಟವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಅನೇಕ ಬಾರಿ ಹಿರಿಯ ಕ್ರೀಡಾ ಪತ್ರಕರ್ತರಿಂದ ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಆದ್ದರಿಂದ ಆಗಿನಿಂದಲೂ ಈ ವಿಷಯವು ನೆನೆಗುದಿಗೆ ಬಿದ್ದಿದೆ.

ಈಗ ಈ ವಿಷಯವನ್ನು ಮತ್ತೆ ಚರ್ಚೆ ಮಾಡುವುದು ಅಗತ್ಯವಾಗಿದೆ. ಈ ಬಗ್ಗೆ ಹೊಸ ಪ್ರಸ್ತಾವವನ್ನು ತಂದು ಟೆಲಿವಿಷನ್ ಕ್ರೀಡಾ ವರದಿಗಾರರನ್ನು ಪ್ರತ್ಯೇಕವಾದ ಒಂದು ಘಟಕವನ್ನು ಮಾಡಿ "ಸ್ವ್ಯಾಬ್" ಚಟುವಟಿಕೆಗೆ ಪೂರಕವಾಗಿ ಇರುವಂತೆ ಮಾಡಲು ಸಾಧ್ಯವಾಗಬಹುದೇ ಎನ್ನುವುದು ಚರ್ಚೆ ಆಗಬೇಕಾಗಿದೆ. ಅದು ಹೊಸ ತಲೆಮಾರಿನ ಕ್ರೀಡಾ ಪತ್ರಕರ್ತರು ಯೋಚಿಸಿ ತೀರ್ಮಾನ ಕೈಗೊಳ್ಳುವಂಥ ವಿಷಯ. ಆದರೆ ಈಗ ಇರುವ "ಸ್ವ್ಯಾಬ್" ನಿಯಮಗಳ ಪ್ರಕಾರ ಕ್ರೀಡಾ ಬರಹಗಾರರ ಹೊರತಾಗಿ ಬೇರೆಯವರಿಗೆ ಅವಕಾಶವಿಲ್ಲ. ಆದರೆ ಒಂದು ಪೂರಕ ಘಟಕವಾಗಿ ಟೆಲಿವಿಷನ್ ಹಾಗೂ ಇಂಟರ್ ನೆಟ್ಗಳ ಕ್ರೀಡಾ ವರದಿಗಾರರು ಹಾಗೂ ಬರಹಗಾರರನ್ನು ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಲು ಯೋಚಿಸಲಾಗಿದೆ. ಅದಕ್ಕೆ "ಸ್ವ್ಯಾಬ್" ಸರ್ವಸದಸ್ಯರ ಸಭೆಯ ಒಪ್ಪಿಗೆ ಕೂಡ ದೊರೆತಿದೆ ಎನ್ನುವುದು ಸಂತಸದ ವಿಷಯ.